ಕೃಷ್ಣ - ಬಗೆದಷ್ಟೂ ಮುಗಿಯದ ಹೊನಲು - ಸಂಪುಟ 1

ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಸಂಪುಟ 1

ಕೃಷ್ಣನ ಬಗ್ಗೆ ಶತಮಾನಗಳಿಂದಲೂ ಕುತೂಹಲ ಮೂಡಿಸಿಕೊಂಡಿರುವ ಜನ ಬಹಳಷ್ಟು . ಆ ಪಾತ್ರವೇ ಹಾಗೆ. ಎಷ್ಟು ತಿಳಿದುಕೊಂಡರೂ ಮತ್ತಷ್ಟು ರೋಚಕತೆ ಭಾವುಕತೆ ಅಪ್ಯಾಯತೆ ಭಕ್ತಿ ಭಾವಗಳು ಮೂಡಿಕೊಳ್ಳುತ್ತವೆ ಮತ್ತು ಇನ್ನಷ್ಟು ತಿಳಿದುಕೊಳ್ಳಲು ಪ್ರೇರೇಪಿಸುತ್ತದೆ. ಮೂಲ ಮಹಾಭಾರತದಲ್ಲಿ ಇರುವ ಕೃಷ್ಣನ ಚಿತ್ರಣವನ್ನು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ವಿವರಿಸುವಾಗ ನಂಗೆ ತಿಳಿಯದಂತೆಯೇ ಕೃಷ್ಣನ ಮೇಲೆಇನ್ನಷ್ಟು ಬಂಧ  ಭಕ್ತಿ ಭಾವಗಳು ಹುಟ್ಟಿಕೊಂಡು ಅವನ ಬಗ್ಗೆ ತಿಳಿಯುವ ಹಂಬಲ ಹುಟ್ಟಿತು. ಪೂಜ್ಯರ ಪ್ರವಚನದಿಂದ ನಾನೇನು ತಿಳಿದುಕೊಂಡೆನೋ ಅದನ್ನು ಸಮಾನಾಸಕ್ತರಿಗಾಗಿ ಪದಗಳ ಪೋಣಿಕೆಯಲ್ಲಿ ಬರೆಯುತ್ತಿದ್ದೇನೆ . 
ಮೊದಲಿಗೆ facebook ನಲ್ಲಿ "ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು" ಶೀರ್ಷಿಕೆಯಡಿಯಲ್ಲಿ ಬರೆದುಕೊಂಡಾಗ ಕೆಲವು ಸ್ನೇಹಿತರು Blog ಬರೆಯುವ ಸಲಹೆ ಕೊಟ್ಟರು ಮತ್ತು ಅಲ್ಲಿ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ತಮ್ಮೆಲ್ಲರಿಗೂ ನಮಸ್ಕಾರಗಳು....  ಶ್ರೀ ಕೃಷ್ಣನಿಗೆ  ಮತ್ತು ಬನ್ನಂಜೆಯವರಿಗೆ ಸಾಷ್ಟಂಗ ಪ್ರಣಾಮಗಳು...... 
ಮೊದಲನೇ ಕಂತಿನಲ್ಲಿ 10 ಭಾಗಗಳಲ್ಲಿ ಕೃಷ್ಣ ಸಂಧಾನದ ಪ್ರಸಂಗದ ಕೃಷ್ಣನ ವ್ಯಕ್ತಿತ್ವ ಮತ್ತು ಮಹಾಭಾರತದ ಆಶಯ ಸಂದೇಶಗಳನ್ನು ನೋಡೋಣ. 

ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 1
ಪಾಂಡವರ ಕಡೆಯಿಂದ ಸಂಧಾನಕಾರನಾಗಿ ಹಸ್ತಿನಾವತಿಗೆ ಹೋದ ಪರಮಾತ್ಮ, ರಾಜ ದುರ್ಯೋಧನನ ಅತಿ ವಿನಯದ, ವಶೀಲಿ (influence) ತನದ ಆಡಂಬರ ಸಹಿತವಾದ ಎಲ್ಲ ಆತಿಥ್ಯವನ್ನು ತಿರಸ್ಕರಿಸಿ ಮುಂದೆ ನಡೆದಾಗ ದುರ್ಯೋಧನ ಹೇಳ್ತಾನೆ, ಕೃಷ್ಣ ನಾನು ನೀನು ಬೀಗರು, ನೀನು ನನ್ನ ಮನೆಯಲ್ಲಿದ್ದರೆ ತಪ್ಪೇನಿಲ್ಲ ಇರು. ರಾಜನೀತಿಜ್ಞ ಸೂಕ್ಷ್ಮ ಮತಿ ಕೃಷ್ಣ ಹೇಳ್ತಾನೆ, ನಾನೀಗ ಬೀಗನಾಗಿ ಬಿಗೋದಿಕ್ಕೆ ಬಂದಿಲ್ಲ, ಒಬ್ಬ ಸಂಧಾನಕರನಾಗಿ ದೂತನಾಗಿ ಬಂದಿದ್ದೇನೆ. ನಿನ್ನ ವೈಯಕ್ತಿಕ ಆತಿಥ್ಯ ಸ್ವೀಕಾರ ವರ್ಜ್ಯ ಅಂತ. ಮುಂದುವರಿದ ದುರ್ಯೋಧನ, ಊಟನಾದ್ರು ನನ್ನ ಮನೆಯಲ್ಲಿ ಮಾಡು ಅಂದಾಗ ನೇರವಾಗಿ ಮಾತಿನ ಪೆಟ್ಟು ಕೊಡುವ ಕೃಷ್ಣ ಹೇಳ್ತಾನೆ,, ಸಂಪ್ರೀತಿ ಭೋಜ್ಯಾನಿ ಅನ್ನಾನಿ ಆಪದ್ ಭೋಜ್ಯಾನಿ ವಾ ಪುನಃ | ನ ಚ ಸಂಪ್ರಿಯ ಸೇ ರಾಜನ್ ನಚೈವ ಆಪದ್ಧತಾ ವಯಂ || ನೋಡು, ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು, ಯಾಕೆ.. ಕೇವಲ ಎರಡು ಕಾರಣಕ್ಕೆ. ಒಂದು ಪ್ರೀತಿಯಿಂದ ಕರೆದ್ರು ಅಂತ ಇನ್ನೊಬ್ರ ಮನೆಗೆ ಹೋಗ್ತೀವಿ, ಅವ್ರ ಪ್ರೀತಿಗೆ ಬೆಲೆಕೊಟ್ಟು ಹೋಗೋದು, ಎರಡನೆಯದ್ದು, ನಮ್ಮ ಮನೆಯಲ್ಲಿ ಊಟಕ್ಕೆ ಗತಿ ಇಲ್ಲದಿದ್ರೆ ಇನೊಬ್ರ ಮನೆಗೆ ಹೋಗೋದು.... ಹೇಳು ನಾನು ನಿನ್ನ ಮನೆಗೆ ಯಾವ ಕಾರಣಕ್ಕೆ ಬರ್ಬೇಕು, ? ನೀನು ಪ್ರೀತಿಯಿಂದ ಕರೀಲಿಲ್ಲ, ನಾನು ಊಟಕ್ಕೆ ಇಲ್ದೆ ಬರ್ಲಿಲ್ಲ... !! ಆಹಾ ಎಂಥಾ ಮಾತು, ನೇರ ನಿಷ್ಠುರ ಸ್ಪಷ್ಟ ಮಾತು, ಕೃಷ್ಣ ಮಾತ್ರ ಹೇಳಲು ಸಾಧ್ಯ. ಆ ವ್ಯಕ್ತಿತ್ವವೇ ಹಾಗೆ... ಕಪಾಳಕ್ಕೆ ಹೊಡೆದಂತೆ ಅಂದ ಕೃಷ್ಣ ಮುಂದೆ ನಡೆದೇ ಬಿಟ್ಟ.... ಆಗ ಏನಾಯ್ತು ಎಲ್ಲಿಗೆ ಹೋದ ಕೃಷ್ಣ !!!!!!! ????? - ಸಶೇಷ

ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 2

ಸಂಧಾನಕಾರನಾಗಿ ಬಂದ ಕೃಷ್ಣ, ದುರ್ಯೋಧನನ ಆತಿಥ್ಯ ನಿಷ್ಠುರವಾಗಿ ತಿರಸ್ಕರಿಸಿದ. ಇಷ್ಟೊತ್ತಿಗೆ ಭೀಷ್ಮ ದ್ರೋಣರು ಕೃಷ್ಣನನ್ನು ನಮ್ಮ ಮನೆಗೆ ಕರೀಬೇಕು ಅಂತ ಅವನ ಎದುರಿಗೆ ಬಂದು ಕೈ ಮುಗಿದು ನಿಲ್ತಾರೆ.. ದ್ರೋಣರಿಗೆ, ನಾನು ಮಹಾ ಬ್ರಾಹ್ಮಣ, ಋಷಿ, ನನ್ನ ಮನೆಗೆ ಕೃಷ್ಣ ಬರದೆ ಎಲ್ಲೋಗ್ತನೆ ಅಂತ ಮನದಲ್ಲಿ ಅಹಂಕಾರದ ಭಾವ ಮತ್ತು ಭೀಷ್ಮರಿಗೆ, ನಾನು ಅಗ್ರ ಪೂಜೆ ಮಾಡಿದವನಲ್ವ, ಕುರುಕುಲ ಹಿರಿಯ ಬೇರೆ, ನನ್ನ ಮನೆಗೆ ಬಾರದೆ ಇನ್ನೆಲ್ಲಿ ಹೋಗ್ತಾನೆ ಅಂತ ಅಹಂಕಾರ...... ಅವ್ರ ಮುಖಭಾವ ನೋಡ್ತಾನೆ ಕೃಷ್ಣ, ಹೇಳ್ತಾನೆ, ನಾನ್ಯಾಕೆ ನಿಮ್ಮ ಮನೆಗೆ ಬರ್ಬೇಕು, ಬರೋಲ್ಲ!!! ಆಶ್ಚರ್ಯ ಆಗ್ತದೆ ಇವ್ರಿಗೆ, ಕೇಳ್ತಾರೆ ಯಾಕೆ ಕೃಷ್ಣ ಅಂತ... ಕೃಷ್ಣ ಹೇಳ್ತಾನೆ, ಆವತ್ತು ಸಭೆಯಲ್ಲಿ ದ್ರೌಪದಿಯ ಶೀಲ ಭಂಗ ಆಗುವಾಗ ನೀವು ಅಲ್ಲೇ ಇದ್ರಲ್ಲ... ದ್ರೌಪದಿ ಬೇಡಿಕೊಳ್ತಾಳೆ, ದ್ರೋಣಸ್ಯ ಭೀಷ್ಮಸ್ಯ ಚ ನಾಸ್ತಿ ಸತ್ವಂ !!!!! ಭೀಷ್ಮ ದ್ರೋಣಾದಿ ಹಿರಿಯರಿದ್ದೀರ ನೀವ್ಯಾರು ಒಂದು ಹೆಣ್ಣಿನ ಶೀಲ ಭಂಗ ಆಗುವುದನ್ನು ತಡೆಯೊಲ್ವ ಅಂತಾ ಕೇಳಿದಾಗ ನೀವು ಸುಮ್ನೆ ಇದ್ರಲ್ವ....... ಒಂದು ಹೆಣ್ಣಿನ ಶೀಲ ಭಂಗವಾಗುವುದನ್ನು ತಡೆಯುವ ನಾಲಿಗೆ ಇಲ್ಲದವರ ಮನೆ ಅನ್ನ ನಾನು ತಿನ್ನುವುದಿಲ್ಲ.... ಹೀಗೆ ಹೇಳಿದ ಕೃಷ್ಣ ಮುಂದೆ ಸಾಗಿಯೇ ಬಿಟ್ಟ..... ರಾಜ ದುರ್ಯೋಧನ ಕರ್ದಾಗ ಅವ್ನಲ್ಲಿ ಹೋಗ್ಲಿಲ್ಲ, ಮಹಾ ಬ್ರಾಹ್ಮಣ ದ್ರೋಣ ಕರ್ದಾಗ ಅವ್ರ ಆತಿಥ್ಯ ಸ್ವೀಕಾರ ಮಾಡ್ಲಿಲ್ಲ, ಅತಿಶೂರ ಕ್ಷತ್ರಿಯೋತ್ತಮ ಭೀಷ್ಮರ ಕರೆಗೆ ಓಗಡ್ಲಿಲ್ಲ..... ಬದಲಿಗೆ ಭಗವಂತ ಎಲ್ಲಿಗೆ ಹೋದ..... ತನ್ನನ್ನು ನನ್ನ ಮನೆಗೇ ಬಾ ಎಂದು ಅಂಗಲಾಚದ , ಬಡವ, ಶೂದ್ರ ವಿದುರನ ಮನೆಗೆ ಹೋಗ್ತಾನೆ..... 😊 ಎಲ್ಲಿ ಅಹಂ ಇಲ್ವೋ, ಎಲ್ಲಿ ಅಧರ್ಮದ ಸೋಂಕು ಇಲ್ವೋ, ಎಲ್ಲಿ ನಿಷ್ಕಲ್ಮಶ ಭಕ್ತಿ ಇದೆಯೋ ಅಲ್ಲಿ ಕರೆಯದೆ ಹೋದ ಕೃಷ್ಣ... 🙏😊 ಆಹಾ !!! ಎಂತಾ ವ್ಯಕ್ತಿತ್ವ..... ಯಾಕೆ ವಿದುರನ ಮನೆಗೆ ಬಂದೆ ಅನ್ನೋದನ್ನ ಕೃಷ್ಣ ಹೇಳ್ತಾನೆ.....ಏನಂತ..!!?? - ಸಶೇಷ
ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 3
ಯಾರು ನಮ್ಮ ಮನೆಗೆ ಕೃಷ್ಣ ಬರಬಹುದೆಂದು ಭಾವಿಸಿದ್ದರೋ ಅಂತವರನ್ನು ಬಿಟ್ಟು, ನಮ್ಮನೆಗೆ ಹೇಗೆ ಬಂದಾನು ಕೃಷ್ಣ ಅಂತ ಅಂದುಕೊಂಡು ಕರೆಯದೇ ಇದ್ದ ವಿದುರನ ಮನೆಗೆ ಹೋದ ಕೃಷ್ಣನನ್ನು ಕಂಡು ದಿಗ್ಭ್ರಮೆ ಗೊಂಡ ವಿದುರ, ಅಯ್ಯಾ ಕೃಷ್ಣ,,
ನನಗೆಷ್ಟು ಸಂತೋಷವಾಗಿದೆ ಅಂತ ಹೇಳೋದಿಕ್ಕೆ ಸಾಧ್ಯವಿಲ್ಲ, ಆದ್ರೆ ಯಾಕೆ ಹೇಳೋದು, ನನ್ನ ಮನಸ್ಸೆಲ್ಲ ತುಂಬಿದ ನಿನಗೆ ಅದು ಗೊತ್ತಾಗೊಲ್ವೆ....
ಅಂತರಾತ್ಮಾಸಿ ದೇಹಿನಾಂ|. ಅಂತಾನೆ.....
ನಾನು ನಿನ್ನನ್ನ ಸ್ವಾಗತಿಸಲು ಏನೂ ಸಿದ್ಧತೆ ಮಾಡ್ಕೊಳ್ಳಿಲ್ಲ, ಬಡವರ ಮನೆಯ ಅಂಬಲಿ ಉಣ್ಣಬೇಕಾಗುತ್ತೆ ಪರಮಾತ್ಮ ಅಂತಾನೆ.....
ಕೃಷ್ಣ ಹೇಳ್ತಾನೆ, ನಂಗೆ ರಾಜಾತಿಥ್ಯ ಬೇಡ ವಿದುರ, ಪ್ರೀತಿ ತುಂಬಿದ ಹೃದಯದಿಂದ ನೀನು ಕೊಡುವ ಅಂಬಲಿಯೆ ಪಂಚ ಭಕ್ಷ ......
ಆದರೆ ಕೃಷ್ಣಾ ಯಾಕೆ ಹೀಗೆ ಹೇಳಿದ? ಯಾಕೇ ವಿದುರನ ಮನೆಗೆ ಹೋದ???
ಯಾಕಂದ್ರೆ, ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನಭಂಗವಾಗುವಾಗ ಅದನ್ನ ವಿರೋಧಿಸಿದ ಏಕೈಕ ವ್ಯಕ್ತಿ ವಿದುರ !!!!!
ಏತದತ್ತಾಹಿ ಕುರವಃ ಯದ್ವಃ ಕೃಷ್ಣಾ ಸಭಾಂಗತ ||
ಕುರುವಂಶದ ನಾಶದ ಸಂಕೇತವಿದು, ನಿಮ್ಮ ಮನೆಯ ಸೊಸೆಯನ್ನು ನೀವೇ ಅಪಮಾನಿಸಿದಿರಿ , ಕುರುಕುಲ ವಿನಾಶಕ್ಕೆ ನಾಂದಿ ಹಾಡಿದಿರಿ
ಅಂತ ಹೇಳಿ ಸಭೆಯಿಂದ ಎದ್ದು ಹೊರ ನಡೆದಿದ್ದ ವಿದುರ......
ಹೆಣ್ಣಿನ ಮಾನಭಂಗವನ್ನು ವಿರೋಧಿಸಿ ಧಿಕ್ಕರಿಸಿ ಹೊರನಡೆದ ಧರ್ಮಾತ್ಮ ವಿದುರನ ಮನೆಗೆ ಕರೆಯ ವಿನಃ ಹೋದ ಭಗವಂತ....🙏😊
ಆಹಾ, ಪ್ರತಿ ಎಳೆಯಲ್ಲು ಪ್ರತಿ ಕ್ರಿಯೆಯಲ್ಲು ತತ್ವ, ಧರ್ಮ, ಗಾಢವಾದ ತರ್ಕ..... ಅವ್ನು ಕೃಷ್ಣ......!🙏😊
ಅಲ್ಲಿಂದ ಮರುದಿನ ರಾಜ ಸಭೆಗೆ ಕೃಷ್ಣ ಹೋದಾಗ ಏನಾಯ್ತು.........????????
- ಸಶೇಷ
ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 4
ಬಯಸದೆ ಬಂದ ಭಾಗ್ಯ ಕೃಷ್ಣನನ್ನು ಸತ್ಕರಿಸಿದ ವಿದುರ ಹೇಳ್ತಾನೆ, ಕೃಷ್ಣ ನೀನು ಸಂಧಾನಕಾರನಾಗಿ ಬರಬಾರದಿತ್ತು, ... ಯಾಕೆ!!??
ದುರ್ಯೋಧನ ಮಹಾನ್ ಮೂರ್ಖ, ಹಠವಾದಿ... ಅವ್ನು ಯಾರ ಮಾತೂ ಕೇಳೋಲ್ಲ.. ಇದರಿಂದ ಯಾವ ಉಪಯೋಗವೂ ಇಲ್ಲ ಕೃಷ್ಣ ಅಂತ ಹೇಳ್ತಾನೆ ವಿದುರ...
ಕೃಷ್ಣ ನಕ್ಕು ಹೇಳ್ತಾನೇ, ವಿದುರ, ಅವ್ನು ಯುದ್ಧದ ನಿರ್ಧಾರದಿಂದ ಹಿಂದೆ ಸರಿಯಲ್ಲ ಅನ್ನೋದು ನನಗೆ ಗೊತ್ತು. ನಿಂಗೂ ಗೊತ್ತು, ಆದರೆ ಲೋಕಕ್ಕೆ ಗೊತ್ತಾಗ್ಬೇಕಲ್ವ, ಜನ ನಾಳೆ ಕೃಷ್ಣ ಒಂದು ಮಾತು ಹೇಳಿದ್ರೆ ಯುದ್ಧ ತಡಿಬೋದಿತ್ತು ಅನಬಾರ್ದು ಅಲ್ವಾ... ಹಾಗಾಗಿ ದುರ್ಯೋಧನ ಏನು ಅಂತ ಲೋಕವೇ ತಿಳ್ಕೊಳ್ಳಿ....... ಅದ್ಕೆ ನಾನು ಬಂದೆ....
ಮರುದಿನ ರಾಜಸಭೆಗೆ ಬಂದ ಕೃಷ್ಣ ಧೃತರಾಷ್ಟ್ರನನ್ನು ಕುರಿತು ಹೇಳ್ತಾನೆ,
ತ್ವಯ್ಯಧೀನಃಶಮೋ ರಾಜನ್ ಮೈಶ್ಚೈವ ವಿಷಃಪತೇ|
ಪುತ್ರಾನ್ ಸ್ಥಾಪಯ ಕೌರವ್ಯ ಸ್ಥಾಪಯಿಷ್ಯಾಮ್ಯಹಂ ಪರ ||
ರಾಜ ಧೃತರಾಷ್ಟ್ರ, ನಾವಿವತ್ತು ವಿಶ್ವಯುದ್ಧದ ಅಂಚಿಗೆ ಬಂದಿದ್ದೇವೆ, ಇದು ಕೇವಲ ಕೌರವ ಪಾಂಡವರ ನಡುವಿನ ಯುದ್ಧವಲ್ಲ, ವಿಶ್ವದ ಸೇನೆಗಳು ತಯಾರಾಗಿವೆ,
ಸಖಿನಾತೈಶ್ಚ ಚೀನೈಶ್ಚ ಯುತಃ ಪ್ರಜ್ಞೋತಿಷಃ ರಿಷಿಕಶ್ಚಾಪಿ ಸಂಗ್ರಾಮಃ.......
ಭಾರತದ ಎಲ್ಲ ಪ್ರಾಂತ್ಯಗಳು, ಅಲ್ಲದೆ, ಚೀನಾ, ರಷ್ಯಾ ಅಪಘಾನಿಸ್ತಾನದ ಸೇನೆಗಳು ಕೂಡ ಯುದ್ಧದಲ್ಲಿ ಕೈ ಜೋಡಿಸಿವೆ... ಇದು ಅತಿವಿನಾಶಕಾರಿ ಪರಿಣಾಮವನ್ನು ಇಡೀ ವಿಶ್ವದ ಮೇಲೆ ಬಿರುತ್ತೆ. ವಿಶ್ವ ಯುದ್ಧದ ಅಂಚಿನಲ್ಲಿದ್ದೇವೆ ನಾವು .. ಈಗ ವಿಶ್ವ ಯುದ್ಧವೋ ವಿಶ್ವ ಶಾಂತಿಯೋ ಅನ್ನುವುದು ನಾನು ಮತ್ತು ನೀನು ನಿರ್ಧಾರ ಮಾಡಬೇಕು.....!!
ಅರೆ, ಅದು ಹೇಗೆ??!!
ನೀನು ನಿನ್ನ ಮಗನ ಮನವೊಲಿಸು, ನಾನು ಪಾಂಡವರ ಮನವೊಲಿಸುತ್ತೇನೆ.... ಒಬ್ಬ ರಾಜನಾಗಿ ಒಬ್ಬ ತಂದೆಯಾಗಿ ನಿನ್ನ ಮಕ್ಕಳು ಯುದ್ಧ ಮಾಡದಂತೆ ತಡೆ, ಅದು ನಿನ್ನ ಜವಾಬ್ದಾರಿ, ನಾನೂ ಪಾಂಡವರನ್ನು ತಡೆಯುತ್ತೇನೆ,, ಇಷ್ಟಾದ್ರೆ ಎಲ್ಲಿದೆ ಯುದ್ಧ !!!
ಅಷ್ಟೇ ಅಲ್ಲ ರಾಜ, ಯುದ್ಧ ಆದ್ರೆ ನಿನ್ನ ರಾಜ್ಯ ಏನಾಗುತ್ತೋ ಗೊತ್ತಿಲ್ಲ, ನಿನ್ನ 100 ಜನ ಮಕ್ಕಳೇನಾಗುತ್ತಾರೋ ಗೊತ್ತಿಲ್ಲ... ಅದೇ ಯುದ್ಧ ಆಗದಿದ್ದರೆ, ನಿನಗೆ 105 ಜನ ಮಕ್ಕಳಿರ್ತಾರೆ,
ಅಷ್ಟೇ ಅಲ್ಲ, ಹೇ ಕುರು ರಾಜನೇ, ಇಡೀ ಭಾರತ ದೇಶಕ್ಕೆ ಚಕ್ರವರ್ತಿಯಾಗಿ ನಾನು ಪಟ್ಟಾಭಿಷೇಕ ಮಾಡ್ತೇನೆ ನಿಂಗೆ... 105 ಮಕ್ಕಳು ನಿನ್ನ ಸೇವೆ ಮಾಡುತ್ತ ನಿನ್ನ ಕೀರ್ತಿ ವಿಶ್ವವ್ಯಾಪಿ ಆಗುವಂತೆ ನೋಡಿಕೊಳ್ಳುತ್ತೇನೆ....
ಏಷಃ ಸ್ವಾರ್ಥಃ ತವಾಕಿಲ, ,,,, ನಿನ್ನ ಸ್ವಾರ್ಥಕ್ಕೋಸ್ಕರನಾದ್ರು ಇದನ್ನು ಮಾಡು, ಒಬ್ಬ ಕುರುಡ ರಾಜ ಇಡೀ ಭರತ ಭೂಮಿಯನ್ನು ಆಳಿದ ಅನ್ನುವ ಕೀರ್ತಿ ನಿನ್ನದಾಗುವಂ ತೆ ಮಾಡುತ್ತೇನೆ ದಯವಿಟ್ಟು ಒಪ್ಪೂ ಅಂತಾನೆ ಕೃಷ್ಣ.......😊
ಅಬ್ಬಾ ಎಷ್ಟು ಸ್ಪಷ್ಟ, ನೇರ, ನಿಖರ ಮತ್ತು ಮುಂದಾಲೋಚನೆ ಪೂರಿತ ಶಾಂತಿ ಸ್ಥಾಪಕೋದ್ದೇಶದ ಮಾತುಗಳು ಕೃಷ್ಣನದ್ದು !!🙏🙏😊😊
ಆದ್ರೆ ಇದಕ್ಕೆ ಧೃತರಾಷ್ಟ್ರ ಏನಂತಾನೆ...!!?????
-ಸಶೇಷ
ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 5
ಭೀಕರ ವಿಶ್ವ ಯುದ್ಧವನ್ನು ತಪ್ಪಿಸಿ ಜಗದಲ್ಲಿ ಶಾಂತಿ ಸ್ಥಾಪನೆಗಾಗಿ ರಾಜಿ ಸೂತ್ರವನ್ನು ರಾಜ ಧೃತರಾಷ್ಟ್ರನ ಮುಂದಿರಿಸಿದ ಕೃಷ್ಣ, ದುರ್ಯೋಧನನನ್ನು ಯುದ್ಧ ವಿಮುಖನನ್ನಾಗಿ ಮಾಡಲು ಮನವೊಲಿಸುವಂತೆ ಹೇಳುತ್ತಾನೆ...
ಹೊಳೆಗೆ ಹಿಂಡಿದ ಹುಣಸೇ ಹುಳಿಯಂತೆ, "ನೀನು ಹೇಳೋದು ಸರಿ, ನಂಗೇನೋ ಒಪ್ಪಿಗೆ. ಆದ್ರೆ ನನ್ನ ಮಾತು ನನ್ನ ಮಗ ಕೇಳೋದಿಲ್ಲ ಕೃಷ್ಣ. ನಾನೇನು ಹೇಳಿಯೂ ಪ್ರಯೋಜನ ಇಲ್ಲ" ಅಂತಾನೆ ಕುರುಡ ಕುರು ರಾಜ....
ಸರಿ ಆದ್ರೆ, ತಾಯಿ ಹೇಳಿದ್ರೆ ಕೆಳ್ಬೋದೇನೋ ಅಂತ ಹೇಳಿ ರಾಣಿ ಗಾಂಧರಿಯನ್ನು ಕರೆದು ನಿನ್ನ ಮಗನಿಗೆ ಸ್ವಲ್ಪ ಬುದ್ದಿ ಹೇಳು ಗಾಂಧಾರಿ ಅಂತ ಧೃತರಾಷ್ಟ್ರ ಹೇಳ್ತಾನೆ.....
ತುಂಬಿದ ಸಭೆಯ ನಡುವಲ್ಲೆ ಗಾಂಧಾರಿ ಹೇಳ್ತಾಳೆ,,
ತ್ವಂ ಏವತ್ರ ಪೃಷಮ್ ಗರ್ಹ್ಯ ಧೃತರಾಷ್ಟ್ರ ಸುತಃ ಪ್ರಿಯಃ
ಬುದ್ಧಿ ಹೇಳಬೇಕಿರೋದು ನಿನ್ನ ಮಗನಿಗಲ್ಲ ನಿನ್ಗೆ ಅಂದು ಬಿಡ್ತಾಳೆ...
ವಾಹ್! ಪ್ರತಿಯೊಂದು ಹೆಣ್ಣು ಪಾತ್ರದ ಚಿತ್ರಣ ಎಷ್ಟು ಚೆನ್ನಾಗಿ ಮೂಡಿದೆ ಭಾರತದಲ್ಲಿ....! ಮಹಾನ್ ಧರ್ಮ ನಿಷ್ಠ ಹೆಣ್ಣು ಆಕೆ, ಗಾಂಧಾರಿ ಯಾವತ್ತೂ ದುರ್ಯೋಧನ ನಮಸ್ಕಾರ ಮಾಡಿದಾಗಲೂ ನಿನಗೆ ಒಳ್ಳೆದಾಗಲಿ ಅಂದವಳಲ್ಲ. ಮತ್ತೆ?
ಯಥೋ ಧರ್ಮಃ ತಥೋ ಜಯಃ
ಆವುದು ಧರ್ಮವೋ ಅದಕ್ಕೆ ಜಯವಾಗಲಿ ಅಂತ ಹೇಳ್ತಿದ್ದ ಧೀರ ಮಹಿಳೆ.....
ದೃತರಾಷ್ಟ್ರನಿಗೆ ಹೇಳ್ತಾಳೆ, ನಾನು ಒಬ್ಬ ತಾಯಿಯಾಗಿ ಹೆತ್ತ ಕರುಳಿನ ಸಂಕಟ ಸಹಿಸಿಕೊಂಡು ಕೂಡಾ ನಿಂಗೆ ಹೇಳಿದೆ, ನಿನ್ನ ಮಗ ಹಿಡಿದ ದಾರಿ ಸರಿಯಿಲ್ಲ, ಅವನನ್ನು ಸರಿಮಾಡು, ಇಲ್ಲದಿದ್ದರೆ ತ್ಯಾಗಮಾಡು,
ಗಾಂಧಾರ ದೇಶದಿಂದ ಬಂದ ನನ್ನಿಂದ ಈ ಕುರುವಂಶ ಯಾವತ್ತೂ ಅಧರ್ಮದ ದಾರಿ ಹಿಡಿಬಾರ್ದು ಅಂತ ಪುತ್ರ ವಾತ್ಸಲ್ಯ ಮರೆತೆ, ಆದ್ರೆ ನೀನು ಮಾಡಿದ್ದೇನು, ಏನು ಹೇಳಿದೆ ನೀನು !!!!
ಅಂತಃ ಕಾಮಮ್ ಕುಲಸ್ತ್ಯಾಸ್ತು ನ ಶಕ್ನೋಮಿ ನಿವಾರಿತಮ್||
ವಂಶ ನಾಶವಾದರೂ ಪರ್ವಾಗಿಲ್ಲ ನಾನು ಮಗನನ್ನು ತಡೆಯೋಲ್ಲ ಅಂದೆ... ಅವನು ದಾರಿತಪ್ಪಿದಾಗ ತಿದ್ದದೆ, ಸಲುಗೆ ಕೊಟ್ಟು ಹೆಗಲ ಮೇಲೆ ಕೂರಿಸಿಕೊಂಡೇ, ಈಗ ಅವನು ತಲೆಯಮೇಲೆ ಕೂತಿದ್ದಾನೆ. ಅದು ಅವನ ತಪ್ಪಲ್ಲ. ಅವನನ್ನು ಹೆಗಲೇರಿಸಿಕೊಂಡದ್ದು ನಿನ್ನ ತಪ್ಪು, ಬುದ್ದಿ ನಿಂಗೆ ಹೇಳ್ಬೇಕು ಅಂತಾಳೆ....
ಎಂತಾ ಚಿತ್ರಣ ಒಂದು ಹೆಣ್ಣಿದ್ದು... 🙏
ಇಷ್ಟು ಹೇಳಿ, ಮುಂದುವರಿದು ಹೇಳ್ತಾಳೆ , ಮಗ ದುರ್ಯೋಧನ... I ಹಠ ಬಿಡು, ಪಾಂಡವರು ನಿಂಗೆ ಅರ್ಧ ರಾಜ್ಯ ಕೊಡ್ತೇವೆ ಅಂತ ಹೇಳಿದ್ದಾರೆ, ಅದು ನಿನ್ನ ಭಾಗ್ಯ, ನ್ಯಾಯವಾಗಿ, ನಿನ್ನಪ್ಪ ಕುರುಡ ರಾಜನಾಗಬಾರದು , ಆದ್ರೆ ಪಾಂಡು ಅಣ್ಣನಿಗೆ ರಾಜ್ಯ ಒಪ್ಪಿಸಿ ವನವಾಸಕ್ಕೆ ಹೋದ ಕಾರಣ ನಿನ್ನಪ್ಪ ಸಿಂಹಾಸನವೇರಿ ಕೂತ. ಈಗ ನಿಜವಾಗಿ ಪೂರ್ತಿ ರಾಜ್ಯ ಪಾಂಡುವಿನ ಮಕ್ಕಳಿಗೆ ಸೇರಬೇಕು, ದಯವಿಟ್ಟು ಅದನ್ನು ನೀಡು ... ಹೀಗೆ ಮಗನಿಗೆ ಬುದ್ಧಿ ಹೇಳ್ತಾಳೆ.....
ನಾಯಿ ಬಾಲ ಡೊಂಕು... ಕಡ್ಡಿ ಮುರಿದಂಗೆ ದುರ್ಯೋಧನ ನಿರಾಕರಿಸುತ್ತಾನೆ... !
ಕೊನೆಗೂ ಕೃಷ್ಣ ಅಂದುಕೊಂಡಿದ್ದೆ ನಿಜವಾಯ್ತು, ಸಂಧಾನ ವಿಫಲವಾಯಿತು.... 😐
ಇಷ್ಟಾದರೂ, ಕೃಷ್ಣನಿಗೆ ದುರ್ಯೋಧನ ರಾಜನಾಗಿರಬಾರದು ಅಂತಿರೋದು ಯಾಕೆ?
ಕೃಷ್ಣ ಪಾಂಡವರ ಪಕ್ಷಪಾತಿಯೆ????
- ಸಶೇಷ


ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 6


ಪಾಂಡವರು ಶಾಂತಿಪ್ರಿಯರು, ಕೃಷ್ಣನಿಗೂ ಯುದ್ಧ ಬೇಕಾಗಿಲ್ಲ, ಆದರೆ ದುರ್ಯೋಧನ ಖಂಡಿತವಾಗಿ ಸಹಬಾಳ್ವೆಗೆ ನಿರಾಕರಿಸುತ್ತಾನೆ. ಆದರೂ ಕೃಷ್ಣನಿಗೆ ಯುದ್ಧ ಮಾಡಿಯಾದರೂ ಸರಿ ದೇಶ ಮತ್ತು ವಿಶ್ವವನ್ನು ಸುಭೀಕ್ಷವಾಗಿಡಬೇಕು, ಆದರೆ ದುರ್ಯೋಧನ ಚಕ್ರವರ್ತಿಯಾದರೆ ಇದು ಯಾವತ್ತೂ ಸಾಧ್ಯವಿಲ್ಲ ಎಂಬ ಅರಿವಿತ್ತು. ಅದಕ್ಕೆ ಕಾರಣ, ದುರ್ಯೋಧನ ಯಾವ ರಾಜನೈತಿಕ ಸಿದ್ಧಾಂತವನ್ನು ಪಾಲಿಸುತ್ತಿದ್ದ ಅನ್ನುವುದು ಕೃಷ್ಣನಿಗೆ ತಿಳಿದಿತ್ತು.... ಗಾಂಧಾರ ದೇಶದ ರಾಜನೀತಿಜ್ಞ ಕಳಿಂಕ ಎಂಬುವವನನ್ನು, ಮಾವ ಶಕುನಿ ದುರ್ಯೋಧನನಿಗೆ ರಾಜ ನೀತಿ ಬೋಧಕನಾಗಿ ನೇಮಿಸಿರುತ್ತಾನೆ. ದುರ್ಯೋಧನನ ರಾಜನೀತಿ ಅದು ಕಳಿಂಕ ನೀತಿ. ಕಳಿಂಕ ನೀತಿ ಏನು? ಅಗ್ನಿಯಾಧಾನೇನ ಯಜ್ಞೇನ ಕಷಾಯೇನ ಜಟಾಜಿನೈಃ ಲೋಕಾನ್ ವಿಶ್ವಾಸಯಿತ್ವೈ ವ ತತೋ ಲುಂಪೇತ್ ವ್ರುಕೋಯತ || ಲೋಕ ಕಲ್ಯಾಣಕ್ಕೆ ಯಾಗ ಯಜ್ಞಾದಿಗಳನ್ನು ಮಾಡುತ್ತೇವೆ ಅಂತ ಬರುವವರನ್ನು ಕರ್ದು ಸರ್ಕಾರದಿಂದ ಸಹಾಯಧನ ಕೊಡು. ಜಟೆ ಗಡ್ಡ ಬಿಟ್ಟುಕೊಂಡು ಬರುವ ಸ್ವಾಮಿಗಳನ್ನು ಮೊದ್ಲು ಅರಮನೆಗೆ ಕರ್ಕೊಂಡು ಹೋಗಿ ಆತಿಥ್ಯ ಮಾಡು, ಆದ್ರೆ, ಯಾವ ಯಜ್ಞವನ್ನೂ, ಯಾವ ದೇವರನ್ನು ಯಾವ ಸ್ವಾಮಿಯನ್ನು ನಂಬಬೇಡ. ಮತ್ತೆ? ಅವ್ರಿಗೆ ಈ ರೀತಿ ಉಪಚಾರ ಮಾಡಿ ಅವರ ಹಿಂಬಾಲಕರ ಅನುಯಾಯಿಗಳ ಬೆಂಬಲ ಗಳಿಸಿಕೊ. ಈ ರೀತಿಯ ಕೆಲಸದಿಂದ ಲೋಕದ ಜನರ ವಿಶ್ವಾಸ ಗಳಿಸಿಕೋ. ಆಮೇಲೆ ಜನರ ಮೇಲೆ ಅತಿ ಸುಂಕ ಹೇರು. ನಮ್ಮ ರಾಜನ ಕೈಗೆ ಎಷ್ಟು ಸುಂಕ ಕೊಟ್ರು ಅದು ಒಳ್ಳೆಯದಕ್ಕೆ ವಿನಿಯೋಗವಾಗುತ್ತದೆ ಅಂತ ನಂಬಿ ಜನ ಕೊಟ್ಟ ತೆರಿಗೆಯಿಂದ ಬೊಕ್ಕಸ ತುಂಬಿದ ನಂತರ ಅದನ್ನು ದೋಚಿ ಮಜಾ ಮಾಡ್ತಾ ಆರಾಮವಾಗಿ ಇರು. !! ಅರ್ವದೇಹಮಿತ್ರಂ ಸ್ಕಂದೇನ ಯಾವತ್ ಕಾಲಸ್ಯ ಪರ್ಯಯಃ | ತಥೆಪ್ರತ್ಯಾಗತೇ ಕಾಲೇ ವಿಂಧ್ಯಾತ್ ಘಟಹ ಮೀಮಾಶ್ಮನೇ || ಇನ್ನು ನಿನ್ನ ವಿರೋಧಿಗಳು ಇರ್ತಾರಲ್ವ, ಅವ್ರನ್ನ ಟೀಕಿಸ್ಬೇಡ. ಅವ್ರು ಬಲಿಷ್ಠರಿದ್ರೆ, ಹೆಗಲ ಮೇಲೆ ಹೊತ್ತುಕೊಂಡು ತಿರುಗು. ಅವ್ರಿಗೆ ಅನ್ನಿಸ್ಬೇಕು, ನಾವಿಷ್ಟು ವಿರೋಧಿಸಿದ್ರು ಇವ್ನು ನಮ್ಮನ್ನು ಹೆಗಲ ಮೇಲೆ ಹೊತ್ಕೊಂಡು ತಿರುಗ್ತಾನೆ ಅಲ್ವಾ ಅಂತ. ಹೀಗೆ ಅವ್ರನ್ನ ದುರ್ಬಲರನ್ನಾಗಿ ಮಾಡು. ಮತ್ತೆ ಒಂದು ದಿನ ಅವ್ರು ಪೂರ್ತಿ ದುರ್ಬಲರಾದಾಗ ಮಡಕೆಯನ್ನು ಬಂಡೆ ಗೆ ಚಚ್ಚಿ ನಾಶ ಮಾಡಿದಂತೆ ಅವ್ರನ್ನ ನಾಶ ಮಾಡು ಮತ್ತು ಅವ್ರು ಸತ್ತಾಗ ಮೊದ್ಲ ಕಣ್ಣೀರು ನಿನ್ನಿಂದಲೇ ಸುರಿಸು !!! ವಾಚಾ ಪರಿಷ್ಯಂ ವಿನೀತಶ್ಚಾತ್ ಹೃದಯೇನ ಯಥಾ ಕ್ಷುರಃ | ಬೆಣ್ಣೆಯಂತೆ ನಾಜೂಕಾಗಿ ಮಾತಾಡು, ಆದರೆ ಒಳಗೆ ಕತ್ತಿ ಮಸೆಯುತ್ತಲೆ ಇರು...!! ಪಕ್ವಂ ಪಕ್ವಂ ಪ್ರಶಾತಯೇತ್ ... ಜನರಿಗೆ ಉಚಿತವಾಗಿ ಎಲ್ಲವನ್ನೂ ಕೊಡುತ್ತಿರು, ನಿನ್ನನ್ನೇ ಅವಲಂಭಿಸಿರುವಂತೆ ಮಾಡು.... ನವಿಶ್ವಸೇ ದವಿಶ್ವಸ್ತೇ ವಿಶ್ವಸ್ತೇ ನಾತಿ ವಿಶ್ವಸೇತ್ | ನಿನಗೆ ಯಾರ ಮೇಲೆ ನಂಬಿಕೆ ಇಲ್ಲವೋ ಅವರನ್ನು ನಂಬಬೇಡ,, ನಿನ್ನನ್ನು ಯಾರು ನಂಬುವುದಿಲ್ಲವೋ ಅವ್ರನ್ನ ನಂಬಬೇಡ , ನಿನ್ನನು ಯಾರು ನಂಬುತ್ತರೋ ಅವ್ರನ್ನ ಕೂಡ ನಂಬಬೇಡ. ಜನರಿಗೆ ಭಾರೀ ಭರವಸೆ ಕೊಡು. ಕಾಲದ ಮಿತಿ ಮುಗಿದಮೇಲೆ, ಅವರ ಮುಂದೆ ಹೋಗಿ ನಾನು ನಿಮಗೆ ಕೊಟ್ಟ ಭರವಸೆ ಖಂಡಿತ ನೆನಪಿದೆ ಅಂತ ವಿನಯದಿಂದ ಹೇಳಿ ಇಡೇರಿಸದ್ದಕ್ಕೇ ಕುಂಟು ಕಾರಣ ಹೇಳಿ ನನ್ನನ್ನೇ ಬೆಂಬಲಿಸ್ತ ಇರಿ ಅಂತ ಮನವೊಲಿಸು. ಮತ್ತೆ, ಬೊಕ್ಕಸ ಖಾಲಿ ಆಯ್ತು ಅಂದ್ರೆ, ನೆರೆ ರಾಜ್ಯದವರು ದಂಡೆತ್ತಿ ಬಂದಿದ್ದಾರೆ ಅಂತ ಡಂಗುರ ಹೊಡೆಸಿ ಜನರಿಂದ ಯುದ್ಧ ಸಹಾಯ ಕೇಳು. ಸಿದ್ಧತೆ ಮಾಡುತ್ತಿರುವಂತೆ ತೋರಿಸಿಕೋ, ನಮ್ಮ ಸಿದ್ಧತೆ ಕಂಡು ಹೆದರಿ ಓಡಿದ್ರು ಶತ್ರುಗಳು ಅಂತ ಮತ್ತೆ ಡಂಗುರ ಹೊಡೆಸು. ಈಗ ನಿನ್ನ ಬೊಕ್ಕಸವೂ ತುಂಬುತ್ತೆ, ಜನಕ್ಕೂ ರಾಜ ವೀರ ಎಂಬ ವಿಶ್ವಾಸ ಬರುತ್ತೆ......!! ಅಬ್ಬಾ !!!!! ಇಷ್ಟೆಲ್ಲ ಕೆಳಮಟ್ಟದ ರಾಜನೀತಿ ಯನ್ನು ಬೋಧಿಸಿಕೊಂಡಿದ್ದ ದುರ್ಯೋಧನ ಅದರ ಸಾಕಾರ ಮೂರ್ತಿಯಂತೆ ರಾಜ್ಯಭಾರ ಮಾಡ್ತಿದ್ದ. ಅಬ್ಬಾ 5000 ವರ್ಷದ ಹಿಂದೆಯೇ ಎಂತಾ ಕೆಟ್ಟ ರಾಜನೀತಿ... ಕೃಷ್ಣ ಇದ್ದದ್ದಕ್ಕೆ ಅಂತಹ ಆಳ್ವಿಕೆ 5000 ವರ್ಷ ಮುಂದಕ್ಕೆ ಹೋಯ್ತು... ಕರ್ಮ, ಮತ್ತೆ ಇವತ್ತು ಇಂತದ್ದೇ ಆಳ್ವಿಕೆ ದೇಶ ಕಂಡಿತು!! ಹಾಗಾಗಿ ಇಂತಹವನ ಕೈಯಲ್ಲಿ ದೇಶ ಇದ್ರೆ ಗತಿಯೇನು ಎಂಬುದಷ್ಟೇ ಕೃಷ್ಣನ ಚಿಂತೆಯಾಗಿತ್ತು... ಹಾಗಾದ್ರೆ ಕೃಷ್ಣ ಪಾಂಡವರನ್ನು ರಾಜ್ಯಭಾರಮಾಡಲು ಬೆಂಬಲಿಸಲು ಕಾರಣ???? ಅವರ ರಾಜನೀತಿ ಏನಾಗಿತ್ತು??? - ಸಶೇಷ

ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 7
ಕಳಿಂಕ ನೀತಿಯನ್ನು ಅನುಸರಿಸುತ್ತಿದ್ದ ದುರ್ಯೋಧನ ರಾಜನಾದರೆ ಅಧರ್ಮದ ಕೈ ಮೇಲಾಗುವುದೆಂದು ತಿಳಿದಿದ್ದ ಕೃಷ್ಣ ಪಾಂಡವರ ಕೈಗೆ ದೇಶದ ಚುಕ್ಕಾಣಿ ಕೊಡುವುದು ಸೂಕ್ತ ಎಂದು ನಿರ್ಧರಿಸಿದ್ದ. ಯಾರು ತನ್ನ ಅತ್ತಿಗೆಯನ್ನೆ ತುಂಬಿದ ಸಭೆಯಲ್ಲಿ ಮಾನಭಂಗ ಮಾಡಲು ಯತ್ನಿಸಿದನೋ,, ಅಂತಹವನ ಕೈಯಲ್ಲಿ ಅಧಿಕಾರ ಇದ್ರೆ ದೇಶದ ಹೆಣ್ಣು ಮಕ್ಕಳ ಸ್ಥಿತಿ ಏನಾಗಬೇಡ.... ಅಲ್ವಾ.... ಹಾಗಾದ್ರೆ ಪಾಂಡವರ ತತ್ವ ಏನು?ಪಾಂಡವರ ನೀತಿ ವಿದುರ ನೀತಿ.
ಏಕಯಾದ್ವೇವಿಶ್ಚಿತ್ಯ ತ್ರಿಂಶ್ಚ ಚತುರ್ಥಿಂ ವಶೇಕೃತ್ವಾ
ಪಂಚ ಜಿತ್ವಾ ಷಡ್ವಿದಿತ್ವ ಸಪ್ತಹಿತ್ವಾ ಸುಖೀಭವ ||
ಒಂದರಿಂದ ಎರಡನ್ನು ನಿರ್ಧಾರ ಮಾಡಿ ಮೂರನ್ನು ನಾಲ್ಕರಿಂದ ವಶಕ್ಕೆ ತಂದುಕೊಂಡು ಐದನ್ನು ಗೆದ್ದು, ಆರನ್ನು ತಿಳಿದು ಏಳನ್ನು ಬಿಟ್ಟು ಚೆನ್ನಾಗಿ ದೇಶವನ್ನು ಆಳು.
ಏನಿದು ಸಂಖ್ಯಾ ಶಾಸ್ತ್ರ..... ಅಂದ್ರೆ,
ರಾಜನಾದವನಿಗೆ ಒಂದು ತಲೆ ಇರ್ಬೇಕು, ಅಂದ್ರೆ ಸ್ವಂತವಾಗಿ ಯೋಚಿಸುವ ವಿವೇಚನಾ ಶಕ್ತಿ ಇರ್ಬೇಕು. ಅದರಿಂದ ಎರಡನ್ನು ನಿರ್ಧಾರ ಮಾಡಬೇಕು. ಯಾವುದು ಎರಡು ಅಂದ್ರೆ, ಒಳ್ಳೆಯದು ಮತ್ತೂ ಕೆಟ್ಟದ್ದು, ಯಾವುದು ಧರ್ಮ ಯಾವುದು ಅಧರ್ಮ, ಯಾವುದು ಸರಿ ಯಾವುದು ತಪ್ಪು ಅನ್ನುವುದನ್ನು ಪಕ್ಷಾತೀತವಾಗಿ ನಿರ್ಧಾರ ಮಾಡಬೇಕು. ಸಮಾಜದಲ್ಲಿ ಮೂರು ರೀತಿಯ ಜನ ಇರ್ತಾರೆ. ನಿನ್ನ ಪರವಾದವರು, ವಿರೋಧವಾದವರು ಮತ್ತು ತಟಸ್ಥ ರು. ಇವರೆಲ್ಲರನ್ನು ನಾಲ್ಕು ರೀತಿಯ ಉಪಾಯದಿಂದ ಗೆಲ್ಲಬೇಕು
ಯಾವುದು ನಾಲ್ಕು, ಸಾಮ ದಾನ ಬೇಧ ದಂಡ. ಯಾರು ಒಳ್ಳೆಯವರು ಅವರಿಗೆ ಮಾತಿನ ಮೂಲಕ ತಿಳಿಹೇಳು. ಇನ್ನು ಕೆಲವರ ಸ್ವಭಾವತಃ ಒಳ್ಳೆಯವರು, ಕಷ್ಟದಿಂದ ಅಡ್ಡದಾರಿ ಹಿಡಿದಿರ್ತರೆ. ಅವರಿಗೆ ಆರ್ಥಿಕ ಸಹಾಯವೊ ಬೆಂಬಲವೋ ನೀಡಿ ಅಂದ್ರೆ ದಾನದಿಂದ ಸುಧಾರಿಸು. ಇನ್ನು ಕೆಲವು ತರ್ಲೆಗಳು ಇರ್ತಾರೆ, ಅವ್ರಿಗೆ ತೊಂದ್ರೆ ಕೊಡುದು ಹವ್ಯಾಸ, ಅಂತವರನ್ನು ಬೇಧದ ಮೂಲಕ, ಅವ್ರ ಮಧ್ಯೆಯೇ ತಂದು ಹಾಕಿ ದೂರ ಮಾಡು. ಇನ್ನು ದುಷ್ಟರನ್ನು ದಂಡಿಸುವ ಮೂಲಕ ಶಿಕ್ಷಿಸು. ಈ ರೀತಿ ಚತುರೋಪಾಯಗಳಿಂದ ರಾಜನಾದವನು ಎಲ್ಲರನ್ನೂ ಜೊತೆಗೆ ಕೊಂಡೊಯ್ಯಬೇಕು. ಐದನ್ನ ಗೆಲ್ಬೇಕು ಅಂದ್ರೆ, ರಾಜನಾದವನು ಮೊದ್ಲು ತನ್ನ ಪಂಚೇಂದ್ರಿಯಗಳನ್ನು ಗೆಲ್ಬೇಕು. ರಾಜ ಜಿತೆಂದ್ರಿಯನಾಗಿರಬೇಕು. ಇಂದ್ರಿಯ ಚಾಪಲ್ಯವಿರದವನಿರಬೇಕು. ಆರು ರೀತಿಯ ಪ್ರತಿಕ್ರಿಯೆಗಳನ್ನು ತಿಳಿದು ನಡೆಯಬೇಕು. ಶತ್ರುಗಳನ್ನು ಯಾವಾಗ ಹೆದರಿಸಬೇಕು,, ಯಾವಾಗ ನೋಡಿ ಸುಮ್ಮನಿರಬೇಕು. ಯಾವಾಗ ಸಂಧಾನ ಮಾಡಿಕೊಳ್ಳಬೇಕು, ಯಾವಾಗ ಪ್ರತಿದಾಳಿ ಮಾಡಬೇಕು, ಯಾವಾಗ ಕುಟಿಲ ನೀತಿ ಅನುಸರಿಸಬೇಕು. ಯಾವಾಗ ಶರಣಾಗತಿಯನ್ನು ಮನ್ನಿಸಬೇಕು, ಯಾವಾಗ ಶರಣಾಗಬೇಕು ಎಂಬ ಆರು ರಾಜನೀತಿಯ ತತ್ವಗಳನ್ನು ತಿಳಿದಿರಬೇಕು. ಮತ್ತು ರಾಜನಾದವನು ಏಳು ಚಟಗಳನ್ನು ಗೆದ್ದಿರಬೇಕು, ಯಾವುದೆಲ್ಲ,
ಸ್ತ್ರಿಯಃ , ಅಕ್ಷ, ಮೃಗಯ, ಪಾನಂ, ವಾಕ್ಪಾರುಶ್ಯ, ಮಹಚ್ಚ ದಂಡಬಾರುಶಿಂ, ಅರ್ಥ ದೂಷಣಂ,
ಸ್ತ್ರೀ ಚಾಪಲ್ಯ, ಅತಿಯಾಗಿ ಜೂಜಾಡುವುದು, ಮೋಜಿಗಾಗಿ ಬೇಟೆಯಾಡುವುದು, ಕುಡಿಯುವುದು, ದುಡ್ಡಿನ ಮದದಲ್ಲಿ ವಿನಯ ರಹಿತವಾಗಿ ಅಹಂಕಾರದಿಂದ ಮಾತನಾಡುವುದು, ಅಧಿಕಾರ ಇದೆಯೆಂದು ವಿರೋಧಿಗಳನ್ನು ಶಿಕ್ಷಿಸುವುದು, ಅತಿಯಾದ ದುಂದು ವೆಚ್ಚ ಮಾಡುವುದು, ಇದೆ ಮೊದಲಾದ ಏಳು ಚಟಗಳನ್ನು ರಾಜನಾದವನು ತನ್ನ ಹತ್ತಿರ ಸುಳಿಯಲು ಬಿಡಬಾರದು. ಹೀಗಿದ್ದಾಗ ಅವನ ರಾಜ್ಯ ಸುಭೀಕ್ಷವಾಗಿರುತ್ತದೆ.
ಇದು ವಿದುರ ಬೋಧಿಸಿದ, ಪಾಂಡವರು ಪಾಲಿಸುವ ರಾಜನೀತಿ.
ಆದ್ದರಿಂದ ಕೃಷ್ಣ ಯೋಚಿಸಿದ್ದು, ದೇಶಕ್ಕೆ ಧರ್ಮಕ್ಕೆ ಯಾವುದು ಒಳಿತು ಅಂತ ಅಷ್ಟೇ. ಅವನು ಯಾರ ಪಕ್ಷಪಾತಿಯು ಅಲ್ಲ.
ಕಳಿಂಕ ನೀತಿಯಿಂದ ಯಾರು ಚೆನ್ನಾಗಿರಲ್ಲ. ( ಹಾಗೆ ಸುಮ್ನೆ, ,,, ಕಳಿಂಕ ಇದ್ದಿದ್ದು ಗಾಂಧಾರ ದೇಶದಲ್ಲಿ ಅಂದ್ರೆ ಇವತ್ತಿನ ಅಪಘಾನಿಸ್ತಾದಲ್ಲಿ. ಅಲ್ಲಿ ಏನಾಗಿದೆ ಇವತ್ತು ಸ್ಥಿತಿ, ಯೋಚನೆ ಮಾಡಿ ಸುಮ್ನೆ)
ಹಾಗಾಗಿ ಧರ್ಮ ಸ್ಥಾಪನೆಗೆ ವಿದುರ ನೀತಿ ಅನುಸರಿಸಿದ ಪಾಂಡವರಿಗೆ ದೇಶದ ಚುಕ್ಕಾಣಿ ಕೊಟ್ಟು ತನ್ನ ಕೆಲಸ ಮುಗಿಸುತ್ತೇನೆ ಎಂದು ನಿರ್ಧರಿಸಿ ಭಗವಂತ ಫಲಿಸದ ಸಂಧಾನದ ವಾರ್ತೆ ತಲುಪಿಸಲು ಪಾಂಡವರಲ್ಲಿ ತೆರಳುತ್ತಾನೆ.
ಸಂಧಾನಕ್ಕೆ ಬರುವ ಮೊದಲು ಒಂದು ರೋಚಕ ಘಟನೆ ನಡೆದಿರುತ್ತೆ, ಏನದು!!???????
- ಸಶೇಷ
ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 8
ಸಂಧಾನಕ್ಕೆಂದು ಹಸ್ತಿನಾವತಿಗೆ ತೆರಳುವ ಮುನ್ನ ಕೃಷ್ಣ, ಯುದ್ಧದ ಬಗ್ಗೆ ಪಾಂಡವರ ಅಭಿಪ್ರಾಯವನ್ನು ಕೇಳುತ್ತಾನೆ. ಧರ್ಮರಾಜನಾದಿಯಾಗಿ ನಕುಲ ಸಹದೇವರವರೆಗೆ ಎಲ್ಲರೂ ಯುದ್ಧ ಬೇಡ ಕೃಷ್ಣ, ನಮಗೆ ಅಧಿಕಾರ ಬೇಡ. ನಾವು ಬೇಕಾದರೆ ದುರ್ಯೋಧನನ ಆಳುಗಳಾಗಿ ಇರುತ್ತೇವೆ, ನಮಗೆ ಶಾಂತಿ ಬೇಕು ಅಂತಾರೆ. [ಏನೆಂದು ಹೇಳ್ತಾರೆ ಅಂತ ಮುಂದಿನ ಭಾಗದಲ್ಲಿ ನೋಡೋಣ]
ಇವರೆಲ್ಲರ ಮಾತು ಕೇಳಿದ ಕೃಷ್ಣ, ಪಾಂಚಾಲಿ, ಬಾ ಇಲ್ಲಿ, ನಿನ್ನ ಅಭಿಪ್ರಾಯವೇನು... ಇವರೆಲ್ಲರಿಗಿಂತ ಹೆಚ್ಚು ಕಷ್ಟ ಅನುಭಿವಿಸಿದವಳು ನೀನು.. ನೀನು ಹೇಳು ಅಂತಾನೆ.
ದುಃಖ ಕ್ರೋಧ ಅಸಹ್ಯ ಭಾವದಿಂದ ತನ್ನ ಸುತ್ತ ನೋಡಿದ ದ್ರೌಪದಿ ಹೇಳ್ತಾಳೆ,
ಧಿಕ್ ಬಲಂ ಭೀಮಸೇನಸ್ಯ, ಧಿಕ್ ಪಾರ್ಥಸ್ಯ ಚ ಗಾಂಢೀವಂ||
ಭೀಮಸೇನನ ತೊಳ್ಬಲಕ್ಕೆ ಧಿಕ್ಕಾರವಿರಲಿ, ಎಲ್ಲ ಲೋಕದಲ್ಲಿ ಬಿಲ್ಲೋಜ ಎಂದು ಖ್ಯಾತನಾದ ಅರ್ಜುನನಿಗೂ ಅವನ ಗಾಂಢೀವಕ್ಕೂ ಧಿಕ್ಕಾರ. ಮೂರು ಲೋಕವನ್ನು ಗೆದ್ದ ಧೀರರೆ ಇರಬಹುದು, ಆದರೆ ಹೆಂಡತಿಯ ಸೆರಗಿಗೆ ಕೈ ಹಾಕಿದಾಗ ಹೋರಾಡಲಾಗದ , ಹೆಂಡತಿಯ ಮಾನಭಂಗದ ಸಮಯದಲ್ಲಿ ಕೈ ಕಟ್ಟಿ ಕೂತ ಇವರ ಪೌರುಷಕ್ಕೆ ನನ್ನ ಧಿಕ್ಕಾರ.
ನೈವ ಮೇ ಪತಯಸ್ಸಂತಿ ನ ಚ ಪುತ್ರಾಃ ನ ಚ ಬಾಂಧವಾಃ ||
ನನಗೆ ಗಂಡಂದಿರಿಲ್ಲ, ಐದು ಜನ ಗಂಡಂದಿರಿದ್ದು ರಕ್ಷಣೆ ಸಿಗದ ನಾನು ಪತಿ ವಿಹೀನೆ. ನನಗೆ ಪುತ್ರರಿಲ್ಲ, ಬಾಂಧವರಿಲ್ಲ. ಭಾರತದ ಸರ್ವ ಶ್ರೇಷ್ಠ ಕ್ಷತ್ರಿಯ ಕುಲದ ಸೊಸೆಯಾಗಿ ಬಂದ ನಾನು ಇಂದೊಬ್ಬ ಅನಾಥೆ ಕೃಷ್ಣ. 😭😢
ದ್ರೌಪದಿಯ ನೋವಿನ ಮಾತು ಕೇಳುತ್ತಾ ಕೃಷ್ಣ ಹೇಳ್ತಾನೇ, ಒಂದುವೇಳೆ ಇವರು ಹೇಳಿದ ಹಾಗೇ ಯುದ್ಧ ಬೇಡವೆಂದು ನಿರ್ಧಾರ ಮಾಡಿದರೆ ನೀನೇನು ಮಾಡುತ್ತೀಯ ಪಾಂಚಾಲಿ????
ಪಿತಾ ಮೇ ಯೋತ್ಸ್ಯತೇ ವೃದ್ಧಃ ಸಹ ಪುತ್ರೈರ್ಭಾರತೈಃ||
ಕೃಷ್ಣಾ ನೀನು ಹೇಳಿದಂತೆ ಒಂದು ಪಕ್ಷ ಆದಲ್ಲಿ, ನಾನು ನನ್ನ ವೃದ್ಧ ತಂದೆಯ ಬಳಿ ಹೋಗಿ ಅವನ ಸೈನ್ಯವನ್ನು ಮುನ್ನಡೆಸಿಕೊಂಡು ಬಂದು ನಾನೇ ಯುದ್ಧ ಮಾಡುತ್ತೇನೆ. ನನ್ನ ಗಂಡಂದಿರು ಬೇಕಾದರೆ ದುರ್ಯೋಧನನ ಸೇವೆ ಮಾಡ್ತಾ ಅವನ ಅರಮನೆಯಲ್ಲಿರಲಿ. ಆದರೆ, 'ಬಾ ನನ್ನ ತೊಡೆಯೇರು' ಎಂದವನ, ನನ್ನ ಮುಡಿ ಬಿಚ್ಚಿದವನ, ನನ್ನ ಸೆರಗಿಗೆ ಕೈ ಹಾಕಿದವನ ಮನೆಯ ಬಾಗಿಲಿನ ಹೊಸ್ತಿಲನ್ನೂ ತುಳಿಯಲಾರೆ ಎನ್ನುತ್ತಾಳೆ ದ್ರೌಪದಿ.....😡
ಇಷ್ಟು ಹೇಳಿ, ಕೃಷ್ಣಾ ಈ ಅನಾಥೆಯ ನೋವು ನಿನಗಾದರೂ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಹೋಗಿ ಕೃಷ್ಣನ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಾಳೆ.
ಆಗ ದ್ರೌಪದಿಯ ಕಣ್ಣಿನಿಂದ ಒಂದು ಹನಿ ನೀರು ಕೃಷ್ಣನ ಪಾದಕ್ಕೆ ಬೀಳುತ್ತದೆ. ದ್ರೌಪದಿಯ ತಲೆ ನೇವರಿಸಿದ ಕೃಷ್ಣ ಹೇಳ್ತಾನೆ,
ರೋದಿಷ್ಯಂತಿ ಸ್ತ್ರಿಯೋಹ್ಯೇವಂ ಏಷಾಂ ಕ್ರುದ್ಧಾಸಿ ಭಾಮಿನೀ||
ದ್ರೌಪದಿ, ಏಳು, ಮೊದಲು ನಿನ್ನ ಕಣ್ಣೀರು ಒರೆಸಿಕೊ. ಯಾರ ಮೇಲಿನ ಕೋಪದಿಂದ ನಿನ್ನ ಕಂಗಳಲ್ಲಿ ಇಂದು ನೀರು ಬಂತೋ ಅಂತಹವರ ಹೆಂಗಸರು ಕಣ್ಣೀರು ಹಾಕ್ತಾರೆ. ನಿನಗೆ ಅನ್ಯಾಯ ಮಾಡಿದ ಎಲ್ಲರೂ ವಿನಾಶವಾಗ್ತಾರೆ. ನಿನ್ನ ಹನಿ ಹನಿ ಕಣ್ಣೀರಿಗೆ ಕಾರಣರಾದ ಸಾವಿರ ಸಾವಿರ ತಲೆಗಳು ಉರುಳಿ ಬೀಳ್ತವೆ. ನಂಬು ಕೃಷ್ಣನ ಈ ಮಾತನ್ನು . ಎನ್ನುತ್ತಾನೆ ಪರಮಾತ್ಮ.....🙏
ಆಹಾ!!! ಎಂಥಾ ಚಿತ್ರಣ ದ್ರೌಪದಿಯದ್ದು. !! ಭಾರತದ ನಾರೀ ಶಕ್ತಿಯ ಒಂದು ಅನಾವರಣ. ಸಾವಾದರು ಸರಿ ಸ್ವಾಭಿಮಾನ ಬಿಡಲಾರೆ ಎಂಬ ವೀರ ವ್ಯಕ್ತಿತ್ವ. 😊
ಇನ್ನು ಕೃಷ್ಣ, ಅವನೊಬ್ಬ ಸ್ತ್ರೀ ಕಂಬನಿ ಒರೆಸಲೆಂದೇ ಅವತಾರ ತಾಳಿದ ಭಗವಂತ.... 🙏😍
ಎಂಥಾ ಪಾತ್ರಗಳು, ಎಂತಾ ಸನ್ನಿವೇಶಗಳು......
ಅದೇ ಕೃಷ್ಣ.... ಅದೇ ಮಹಾಭಾರತ....... 😍🙏😊
ಪಾಂಡವರು ಕೃಷ್ಣನ ಬಳಿ ತಮ್ಮ ಅಭಿಪ್ರಾಯಗಳು ಏನೆಂದು ಹೇಳಿದರು? ದ್ರೌಪದಿ ಯಾಕೆ ಸಿಟ್ಟಾಗಿದ್ದಳು??
- ಸಶೇಷ
ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 9
ಯುದ್ಧದ ಬಗ್ಗೆ ಪಾಂಡವರ ಅಭಿಪ್ರಾಯ ಕೇಳಲು ಕೃಷ್ಣ ಅವರ ಮನೆಗೆ ಬಂದಾಗ ತನಗಾದ ಅನ್ಯಾಯ ಅವಮಾನಗಳನ್ನು ನೆನೆದು ಆ ಅಧರ್ಮಿಗಳಿಗೆ ತಕ್ಕ ಶಾಸ್ತಿ ಆಗಬೇಕು ಎಂದು ದ್ರೌಪದಿ ಕೃಷ್ಣನ ಬಳಿ ಹೇಳುತ್ತಾಳೆ. ಆದ್ರೆ ಧರ್ಮರಾಯ ಮತ್ತು ಇತರೆ ಪಾಂಡವರು ಏನು ಹೇಳ್ತಾರೆ ಗೊತ್ತಾ....
ಮೊದಲಿಗೆ ಧರ್ಮರಾಯ ಹೇಳ್ತಾನೆ, ನನಗೆ ಯುದ್ಧ ಬೇಡ, ನಮ್ಮ ಜೀವನಕ್ಕೆ ಐದು ಗ್ರಾಮಗಳನ್ನು ಕೊಡ್ಲಿ ನಾವು ನೆಮ್ಮದಿಯಿಂದ ಬದುಕುತ್ತೇವೆ.
ಸಾಮ್ರಾಜ್ಯದಾಸೆಗೆ ಹೋರಾಡುವುದು ಎಂದರೆ ನಾಯಿಗಳೆರಡು ಮಾಂಸದ ತುಂಡಿಗಾಗಿ ಹೋರಾಟ ನಡೆಸಿದಂತೆ ಇರುತ್ತದೆ. ನಾಯಿಗಳು ಹೇಗೆ ಆಡ್ತಾವೆ ಅಂದ್ರೆ,
ಲಾಂಗುಲ ಚಾಲನಮ್ ಕ್ಷ್ವೇಡಾ ಪ್ರತಿವಾಕಃ ವಿವರ್ತನಮ್ |
ದಂತ ದರ್ಶನಂ ಆರಾವಃ ತಥೋ ಯುದ್ಧಃ ಪ್ರವರ್ತತೆ ||
ಒಂದು ನಾಯಿ ಮೊದಲಿಗೆ ಇದು ನನಗೆ ಸೇರಿದ ಮಾಂಸ ನೀನು ಹೋಗು ಅಂತ ಹೇಳೋದಿಕ್ಕೆ ಬಾಲ ಅಲ್ಲಾಡಿಸುತ್ತದೆ. ಇನ್ನೊಂದು ನಾಯಿ ಕೂಡ ತನ್ನ ಬಾಲ ಅಲ್ಲಾಡಿಸುತ್ತದೆ. ಒಂದನ್ನೊಂದು ನೋಡಿಕೊಂಡು ಗುರು ಗುಟ್ಟಿಕೊಳ್ಳುತ್ತವೆ. ಎರಡೂ ನಾಯಿಗಳು ಉಗುರು ಹೊರಗೆಳೆದು ಎರಡು ಹೆಜ್ಜೆ ಮುಂದೆ ಬರ್ತಾವೆ. ಎರಡೂ ತಮ್ಮ ಹಲ್ಲು ಕಿಸಿಯುತ್ತವೆ . ಎರಡೂ ನಾಯಿಗಳು ಬೊಗಳಿಕೊಳ್ಳುತ್ತವೆ. ಇಷ್ಟಾದ ಮೇಲೆ ಒಂದರ ಮೇಲೊಂದು ಬಿದ್ದು ಹೋರಾಟ ಮಾಡಿ, ಯಾವ ನಾಯಿ ಬಲಿಷ್ಠವೋ ಅದು ಆ ಮಾಂಸದ ತುಂಡನ್ನು ತೆಗೆದುಕೊಂಡು ಹೋಗುತ್ತದೆ.
ಈ ರೀತಿ ನಾಯಿಗಳ ತೆರದಿ ಮನುಷ್ಯರಾದ ನಾವು ಕಿತ್ತಾಡಿಕೊಳ್ಳಭೇಕೆ ಕೃಷ್ಣ ?!!!! ಬೇಡ ಕೃಷ್ಣ. ನನಗೆ ಯುದ್ಧ ಬೇಡ. ಶಾಂತಿ ಬೇಕು ಅಂತಾನೆ.
ಅಪ್ಪಾ ಧರ್ಮರಾಯ ನೀನು ಯಾವಾಗಲೂ ಶಾಂತಿ ಪಾಠ ಮಾಡುವವನೇ.. ಆದರೆ ನೋಡುವ ನಮ್ಮ ಭೀಮ ಏನು ಹೇಳ್ತಾನೆ ಅಂತ ಭೀಮಸೇನನ್ನು ಕೇಳ್ತಾನೆ ಕೃಷ್ಣ.
ಭೀಮ ಹೇಳ್ತಾನೆ, ಕೃಷ್ಣ, ಯುದ್ಧ ಬೇಡ ಶಾಂತಿಗಾಗಿ ಪ್ರಯತ್ನಿಸು.
ನೀಚೈರ್ಭೂತ್ವಾ ಅನುಯಾಸ್ಯಮಃ ವಯಂ ದುರ್ಯೋಧನಂ ಸಹ.....
ದುರ್ಯೋಧನನೇ ರಾಜನಾಗಿ ಇರ್ಲಿ. ಅವ್ನ ಪರಿಚಾರಕನಾಗಿ ನಾನು ವಿನೀತತೆಯಿಂದ ಅವನ ಕೈ ಕೆಳಗೆ ಕೆಲಸ ಮಾಡ್ತಾ ಇರ್ತೆನೆ ಅಂತ ಹೇಳ್ತಾನೆ.
ಭೀಮನ ಮಾತು ಕೇಳಿ ಕೃಷ್ಣ ಸ್ಪಲ್ಪ ಅವನನ್ನು ಕಿಚಾಯಿಸುತ್ತಾನೆ. ಏನಪ್ಪಾ ಭೀಮ, ಅಣ್ಣ ಏನೋ ಶಾಂತಿ ಅಂದ ಸರಿ ಆದ್ರೆ ಭೀಮನಿಗು ಯುದ್ಧ ಅಂದ್ರೆ ಹೆದರಿಕೆಯ ಅಂತಾನೆ.
ಅದಕ್ಕೆ ಭೀಮ, ಹಹಹ, ಹೆದರಿಕೆ ಅನ್ನೋದು ನನ್ನ ಜಾಯಮಾನದಲ್ಲೆ ಇಲ್ಲ ಕೃಷ್ಣ, ಆದರೆ ಯುದ್ಧ ಬೇಡವೆಂದು ಯಾಕೆ ಹೇಳಿದೆ ಅಂದ್ರೆ,
ಮಾಸ್ಮನೋರತಾಹ ನಷ್ಯತ...
ಭಾರತ ದೇಶದ ಜನಾಂಗ ಹತ್ಯೆಯಾಗಬಾರದು. ಇಲ್ಲಿ ವ್ಯಾಜ್ಯವೋ ಇನ್ನೊಂದೋ ಇರುವುದು ನಮಗೆ ಮತ್ತು ಕೌರವರಿಗೆ. ಆದರೇ ಯುದ್ಧ ಅಂದ್ರೇ ಒಂದು ಜನಾಂಗದ ನಾಶ, ಹಾಗಾಗಿ ನಂಗೆ ಯುದ್ಧ ಬೇಡ ಶಾಂತಿಯಿಂದ ಇರೋಣ ಅಂತಾನೆ.
ಸಹಸ್ರ ಗುಣವಂ ಕೇತತ್ ತ್ವಯಿ ಸಂಭಾವ್ಯಾಯಹಂ.!
ಕೃಷ್ಣ ಹೇಳ್ತಾನೆ, ಭೀಮ, ಎಂಥಾ ವ್ಯಕ್ತಿತ್ವ ಕಣಯ್ಯಾ ನಿಂದು. ನೀನು ನಿನ್ನನ್ನು ಎಷ್ಟು ತಿಳಿದಿದ್ದಿಯೋ ಅದಕ್ಕಿಂತ ಸಾವಿರ ಪಟ್ಟು ಹೆಚ್ಚಿನ ವ್ಯಕ್ತಿತ್ವ ಕಣಪ್ಪ....
ನಂತರ ಮುಂದುವರಿದು ಅರ್ಜುನ ನಕುಲ ಸಹದೇವರನ್ನು ಕುರಿತು ಕೇಳಿದಾಗ ಅವರೂ ಕೂಡ ಅಣ್ಣಂದಿರ ವರಸೆಯಲ್ಲೇ ಉತ್ತರಿಸುತ್ತಾರೆ.
ಇದನ್ನು ಕೇಳಿದ ನಂತರ ದ್ರೌಪದಿಯ ಅಭಿಪ್ರಾಯ ಪಡೆದು ಸಂಧಾನಕ್ಕೆ ಎಂದು ಹಸ್ತಿನಾವತಿಗೆ ತೆರಳುತ್ತಾನೆ ಕೃಷ್ಣ.
ತೆರಳುವ ಮುನ್ನ ಭೀಮನನ್ನು ಕರೆದು ಹೇಳ್ತಾನೆ, ಎಲ್ಲರಿಗೂ ಶಾಂತಿಯೇ ಬೇಕು, ಯಾರಿಗೂ ಯುದ್ಧ ಬೇಡ. ಹೌದು ನನಗೂ ಅದು ಇಷ್ಟವೆ. ಆದರೆ ಯುದ್ಧ ನಡೆದೇ ತೀರುತ್ತದೆ. ನನ್ನ ಪ್ರಯತ್ನ ನಾನು ಮಾಡುತ್ತೇನೆ. ಆದರೆ ನೀವು ಯುದ್ಧದ ಸಿದ್ಧತೆ ಮಾಡಿಕೊಳ್ಳಿ. ಈ ಯುದ್ಧವನ್ನು ತಪ್ಪಿಸುವುದು ಅಸಾಧ್ಯ ಎನ್ನುತ್ತಾನೆ.😑
ಬಿಟ್ಟಕಣ್ಣು ಬಿಟ್ಟು, ಕೃಷ್ಣನ ಮಾತನ್ನೇ ಯೋಚಿಸುತ್ತಾ, ಅರೆ ಅಷ್ಟು ನಿಖರವಾಗಿ ಇವ ಹೇಗೆ ಯುದ್ಧ ನಡೆಯುತ್ತದೆ ಎಂದು ಹೇಳಿದ ಅಂತ ಕುತೂಹಲಿಗಳಾಗ್ತರೆ ಪಾಂಡವರು.
ಅವನು ಕೃಷ್ಣ. ಧರ್ಮ ಸಂಸ್ಥಾಪನೆ ಮಾಡಲು ಬಂದ ಭಗವಂತ. ಯಾರು ಹೇಗೆ ಅನ್ನುವುದು ಅವನಿಗೆ ಗೊತ್ತು. ಯಾವಾಗ ಎಲ್ಲಿ ಏನಾಗುತ್ತದೆ ಅನ್ನುವುದು ಗೊತ್ತು. ಕರ್ಮ ಫಲ ಅನುಭವಿಸಲೇ ಬೇಕು. 🙏
ಸಂಧಾನಕ್ಕೆ ತೆರಳಿದ ಕೃಷ್ಣನ ಒಳಮನಸನ್ನು ಇನ್ನೊಂದು ಸ್ವಲ್ಪ ತಿಳಿದುಕೊಳ್ಳೋಣವೇ????!!!!!😊🙏
- ಸಶೇಷ
ಕೃಷ್ಣ - ಬಗೆದಷ್ಟೂ ಮುಗಿಯದ  ಹೊನಲು - ಭಾಗ 10
ಕೃಷ್ಣ, ಅದೊಂದು ಕನ್ನಡಿ,,
ನಾವೇನು ಇದ್ದೇವೋ ಆ ದೃಷ್ಟಿಯಿಂದ ಕೃಷ್ಣನನ್ನು ನೋಡಿದರೆ ನಮಗೆ ಅದೇ ರೀತಿ ಆತ ತೋರುತ್ತಾನೆ.
ಮುಗ್ಧ ಮಗುವಿಗೆ,, ಆತ ಪುಟ್ಟ ಕೃಷ್ಣ.
ಪ್ರೀತಿಸುವ ತಾಯಿ ಹೃದಯಕ್ಕೆ ಮುದ ನೀಡುವ ಬಾಲ ಲೀಲೆಯ ತುಂಟ ಬಾಲ ಕೃಷ್ಣ.
ಯೌವ್ವನದ ಪ್ರೀತಿಯಲ್ಲಿ ಬಿದ್ದ ಯುವಜನಕೆ ಆತ ಶೃಂಗಾರದ ಗಣಿ.
ಊರಿಗೇ ಒಳ್ಳೆಯದಾಗಲಿ ಎಂದ ಸಮಾಜ ಮುಖಿಗಳಿಗೆ ಆತ ಗೋವರ್ಧನ ಗಿರಿಧಾರಿ....
ಹೆದರಿದ ಕಂಸನಿಗೆ ಆತ ತನ್ನ ಮೃತ್ಯು.
ದನಕಾಯುವವರಿಗೆ ಅವ ಗೊಲ್ಲ.
ತನ್ನ ಕೆಲಸ ಶ್ರೇಷ್ಠ ಎಂದು ಭಾವಿಸಿದವರಿಗೆ ಆತ ಪಾರ್ಥಸಾರಥಿ
ಬಡವ ಸುಧಾಮನಿಗೆ ಆತ ವಿನಯಶೀಲ ಗೆಳೆಯ.
ಅಣ್ಣ ಎಂದು ನೋಡಿದರೆ ಆತ ಸುಭದ್ರಾಗ್ರಜ.
ಮೋಸ ಮಾಡಲು ನಿಂತವನಿಗೆ ಆತ ನಯವಂಚಕ
ಸುಳ್ಳು ಹೇಳುವವರಿಗೆ ಆತ ಯುಧಿಷ್ಠಿರನಿಂದ ಅನೃತ ನುಡಿಸಿದಾತ.
ಸಮಾಜ ಸುಧಾರಕರಿಗೆ ಆತ ಶೂದ್ರ ವಿದುರನ ಆತಿಥ್ಯ ಸ್ವೀಕರಿಸಿದ ಸರ್ವ ಪಂಥ ಸಮಭಾವುಕ..
ಓಡಿ ಹೋಗಿ ಮದುವೆ ಆಗೋಣವೆಂದವರಿಗೆ ರುಕ್ಮಿಣೀ ರಮಣ
ಗೆಳೆತನ ಎಂದವರಿಗೆ ಸುಧಾಮನ ಮಿತ್ರ
ಸ್ತ್ರೀ ಲೋಲ ಎಂದವರಿಗೆ , ಗೋಪಿಕಾ ವಸ್ತ್ರಾಪಹಾರಕ
ಸ್ತ್ರೀ ರಕ್ಷಕ ಎಂದವರಿಗೆ, ದ್ರೌಪದೀ ಮಾನ ಸಂರಕ್ಷಕ
ಕುತಂತ್ರಿ ಎಂದವರಿಗೆ ಭೀಷ್ಮ ದ್ರೋಣ ಯುದ್ಧ ನಿವೃತ್ತಿ ಸಂಯೋಜಕ
ಹಿಂಸಾಪ್ರವೃತ್ತಿಗಳಿಗೆ ಆತ ಮಹಾಭಾರತ ಯುದ್ಧ ಪ್ರಚೋದಕ
ಮನೋ ಶಾಸ್ತ್ರಜ್ಞ ಎಂದವರಿಗೆ ಪಾರ್ಥ ಮನೋ ಪರಿವರ್ತಕ
ಆಚಾರ್ಯ ಎಂದವರಿಗೆ ಗೀತಾ ಬೋಧಕ
ನೀನೇ ಪರಮಾತ್ಮ ಎಂದ ಭಕ್ತರಿಗೆ ವಿಶ್ವರೂಪ ದರ್ಶಕ ಶ್ರೀಮನ್ನಾರಾಯಣ.......🙏😍🙏
ಹೀಗೆ ಜಗತ್ತಿನಲ್ಲಿ ಇರುವ ಪ್ರತಿಯೊಂದು ಜೀವಿಯ ಪ್ರತಿ ಭಾವದಲ್ಲಿ ನೋಡಿದರೂ ಕೃಷ್ಣ ಆ ಭಾವಕ್ಕೆ ಸರಿ ಹೊಂದುವಂತೆ ಕಾಣುತ್ತಾನೆ.
ಕೃಷ್ಣನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಕಷ್ಟ ಪಡಬೇಕು. ಅಪಾರ್ಥ ಪಟ್ಟುಕೊಳ್ಳುವುದೆಂದರೆ ಅದು ಬಲು ಸುಲಭ.
ಜಗತ್ತಿನ ಅತಿ ಸಂಕೀರ್ಣ ವ್ಯಕ್ತಿತ್ವ, ಅದು ಕೃಷ್ಣನದ್ದು. ಬಗೆದಷ್ಟು ಉಕ್ಕಿ ಬರುವ ಹೊನಲು ಅದು....😍
ಇನ್ನೂ ಬಗೆಯೋಣ.... ಅವನೇನು ಅನ್ನೋದು ಅರ್ಥ ಮಾಡಿಕೊಳ್ಳೋಣ. ಅವನೇನೆಂದು ಅರ್ಥ ವಾದರೆ ನಾವು ಏನು ಎಂದು ನಮಗೆ ಅರ್ಥವಾಗುತ್ತದೆ 😊🙏
ಕಳೆದ ಹತ್ತು ದಿನಗಳಿಂದ ಕೃಷ್ಣಾನ್ವೇಷಣೆ ಯಲ್ಲಿ ಜೊತೆಯಾದ ತಮಗೆ ಧನ್ಯವಾದ.. ಪ್ರೋತ್ಸಾಹ ಮುಂದೆಯೂ ಹೀಗೆ ಇರ್ಲಿ.
ಮತ್ತೆ ಮುಂದಿನ ಅನ್ವೇಷಣೆಯಲ್ಲಿ ಸಿಗೋಣ 😊🙏
ವಸುದೇವಂ ಸುತಂ ದೇವಂ ಕಂಸ ಚಾಣುರ ಮರ್ಧನಂ
ದೇವಕೀ ನಂದನಂ ಕೃಷ್ಣಂ ವಂದೇ ಜಗದ್ಗುರುಂ ||
🙏🙏🙏🙏🙏🙏🙏🙏🙏🙏🙏🙏🙏🙏🙏

Comments

  1. Krishna is beyond my imagination, I can only bow my head 🙏🙏🙏

    ReplyDelete
  2. ಶ್ರೀಬನ್ನಂಜೆ ಗೋವಿಂದಾಚಾರ್ಯರ ಉಪನ್ಯಾಸವನ್ನು ಕೇಳಿ, ಯಥಾವತ್ತು ಬರವಣಿಗೆ ರೂಪದಲ್ಲಿ ಪ್ರಕಟಿಸಲಾಗಿದೆ.

    ReplyDelete

Post a Comment